Tuesday, April 19, 2011

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!!


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಬರುವೆ ಎಂದೆ ಕಾದಿರುವೆ
ಮಳೆಯು ಸೋನೆ ಸುರಿಸಿದೆ ಇಲ್ಲೆ
ನೀ ಏಲ್ಲಿಹೆ ಹೇಳು ನಾ ಬರುವೆ
ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ
ನನ್ನಿ ಬಂಧದಿ ಬೆಚ್ಚನೆ ಇಡುವೆ


ಇರಚಲು ಹೊಡೆದಿದೆ ತೆಂಕಣದಿಂದ
ಮೇಘವು ಹೊರಳಿದೆ ಬಡಗಣದಿಂದ
ಅರಳಿ ಮರದಡಿ ನಿಂತುಬಿಡು
ನನಗೆಂದು ಸ್ವಲ್ಪವೇ ಜಾಗವಿಡು
ಬೇಗನೆ ಬರುವೆ ನೋಡೊ ಆತುರವಿಹುದು
ಕೈಯಲಿ ಕೆಂಪನೆ ಗುಲಾಬಿಯಿಹುದು


ಕೆರೆಯು ತುಂಬಿದೆ ನಿನಗೇಳಲೆ ಬೇಕು
ಕೋಡಿಯ ಮಧ್ಯಕೆ ನಿನ್ನ ಕರೆತರಬೇಕು
ಬೆದರಿದ ಬೊಂಬೆ ಕಣ್ಮುಚ್ಚುವೆ ನೀನು
ಕಾಲು ನಡುಗಿಸಿ ಜಾರಿಸುವೆನು ನಾನು
ಕೋಟೆ ಮಾರುತಿಯ ನೆನೆದು ನೀನು
ಹಿಡಿದಪ್ಪುವೆ ತೋಳನು, ನನ್ನನ್ನು


ಕಾಣದ ಕನ್ನಿಕೆ ನಲ್ಮೆಯ ನಲ್ಲೆ
ನೀ ಎಲ್ಲೆ ಇರುವೆ ನಾ ಬಂದಿರುವೆ
ಪೇಟೆಬೀದಿಯಲಿ ಮದುವೆಯ ದಿಬ್ಬಣ ಒಂದಿದೆ
ನಾ ಅದನು ದಾಟಿ ಬರುತಿರುವೆ
ನನಗ್ ತಿಳಿಯದ ಮದುವೆ ಯಾವುದೋ ಕಾಣುವೆ
ನೀ ಮಧುಮಗಳಾಗಿ ಕುಂತಿರುವೆ
ನೀ ಮಧುಮಗಳಾಗಿ ಕುಂತಿರುವೆ...

1 comment: