Monday, October 13, 2014

ಮುಗಿಯದಿರು ದಾರಿ...


ಮುಗಿಯದಿರು ದಾರಿ, ನಿನ್ನ ಮೇಲೆ ಹೊಂಟಿಹೆನು ಸವಾರಿ
ಬೆಟ್ಟಗುಡ್ಡಗಳ ಏರಿ, ಇಳಿ ಬಂಡೆಗಳ ಜಾರಿ
ಹೊಂಬಿಸಿಲ ಬುಟ್ಟಿಯಲಿ ನಾ ನೆಡೆದದೆ ದಾರಿ!!
ಮಾಯ ಮರ್ಕಟವೇರಿ, ಹಸಿರು ಕಾನನವ ಹಾರಿ
ನೀಲಿ ಸಾಗರ ಪಾರಿ, ಮರುಭೂಮಿಯ ಸವರಿ
ನಾನು ನನ್ನಿಚ್ಚೆಯಲಿ ಗಮ್ಯ ತಿಳಿಯದ ಅಲೆಮಾರಿ!!

ಯಾರು ಇಲ್ಲದ ಜಗದಲಿ, ನನ್ನನ್ನಾಳುವ ನನ್ನಲಿ
ಹಂಗಿರಲಿ, ಅಹಂ ಇರಲಿ, ಕಾಣದ ಖುಷಿಯಿರಲಿ
ಉಪ್ಪಿರಲಿ, ಸೊಪ್ಪಿರಲಿ, ಅನುಭವಿಸೊ ರುಚಿಯಿರಲಿ!!
ಜೊತೆಗೆ ಬಂದವರಿರಲಿ, ಎಲ್ಲೊ ನಿಂತವರಿರಲಿ
ಚಳಿಯಿರಲಿ, ಮಳೆಯಿರಲಿ, ತೊಯ್ಯದಿರು ಕಡೆಯಲಿ
ಬಿಸಿಲಿರಲಿ, ಬಿರುಗಾಳಿ ಬರಲಿ, ತಳ್ಳದಿರು ಜವರಲಿ!!

ಕನಸುಗಳ ಸಂತೆಯಿದೆ, ಕಟ್ಟುಪಾಡುಗಳ ಚಿತೆಯಿದೆ
ತಣಿವಿದೆ, ತ್ರುಷೆಯಿದೆ ಕನಸಿನ ಹಿಂದೆ
ನಿಂತ ಅರಿವಿದೆ, ಕೊಳ್ಳಿಹಿಡಿದಿದೆ, ಚಿತೆಯೇರಿದೆ!!
ಹೊಸ ಹುರುಪಿದೆ, ಯುಗಳ ಚಿಮ್ಮಿದೆ
ನ್ಯೂನ್ನತೆಯ ಲಕ್ಷ್ಯವಿದೆ, ಅಜ್ಞಾತ ತತ್ತ್ವವಿದೆ
ಎಲ್ಲ ತಿಳಿವಿದೆ ಮುಂದೆ ಮುಗಿಯದ ದಾರಿಯಿದೆ!!
                       -ಸುರೇಂದ್ರ ನಾಡಿಗ್

Tuesday, May 13, 2014

ಎಲ್ಲಿ ಹೋದೆ ಇಂದು?


ಕೇಳಲಿಲ್ಲ ಇಂದು ನಿನ್ನ ಪಿಸುಮಾತು
ನಿನ್ನ ನೋಡದೇನೆ ಒಂದು ಸಂಜೆಯಾಯ್ತು
ನಿನ್ನ ದನಿಗೆ ನಾ ಮನಸೋತು
ಕಾದಿರುವೆ ನಿನಗೆ ಇಲ್ಲೆ ಕೂತು ಕೂತು

ಊರು ಕೇರಿ ತಿರುಗಿ ಬಂದೆ ನೀ ಸಿಗುವೆ ಎಂದು
ಅಜ್ಜಿ ಅಂಗಡಿಲಿ ಬತ್ತಾಸು ಕೊಂಡುಕೊಂಡು
ಬಾವಿ ಕಟ್ಟೆ ಮೇಲೆ ಕುಂತೆ, ಕೊಡವ ಹಿಡಿದು ಕೊಂಡು
ಎಲ್ಲಿ ಹೋದೆ ಇಂದು? ಬೇಗ ಬಂದು ನೋಡು

ಮಲಗಿರುವೆಯ ನೀನು? ಜ್ವರ ಬಂದು?
ತಪ್ಪು ಮಾಡಿದೆ ಏನು? ಅಪ್ಪ ಸಿಡುಕಿದರೇನು?
ತಾಳಲರೆ ಇನ್ನು! ನಿನ್ನ ಮನೆಗೆ ಹೊರಟೆ ನಾನು!
ತಾಳು, ತಾಳು! ನಿನ್ನಮ್ಮ ಕೇಳಿದರೆ ನಾ ಉತ್ತರಿಸಲೇನು?

ಮೂಲೆ ಬೀದಿ ಮಾರಮ್ಮನ ಗುಡಿಗೆ ಕೈ ಮುಗಿದು
ಕೋಟೆ ಆಂಜನೇಯನಿಗೆ ಕಾಯಿ ಒಡೆದು
ನಮ್ಮಪ್ಪ ಗಣಪನಿಗೆ ಹರಕೆ ಕಟ್ಟಿಕೊಂಡು
ಹೆಜ್ಜೆ ಹೆಜ್ಜೆಗೂ ಹೆದರಿಕೊಂಡು, ನಿನ್ನ ಮನೆಗೆ ಬಂದೆ ನೋಡು

ಏಕೆ ಇಷ್ಟು ಜನರು? ಮನೆಯಲಿ ಹಬ್ಬವೇನು?
ನಮ್ಮಪ್ಪ ನಿಂತಿಹರು ಹೊಗೆ ಸರಿಸಿಕೊಂಡು
ಅಲ್ಲಿ, ಮಧ್ಯದಲಿ ಮಲಗಿರುವುದು ನೀನೇನು?
ನಿನ್ನುಸಿರು ಇರದೆ.... ನಿಂತಿತು ನನ್ನೆದೆಯ ಗೂಡು

   -ಸುರೇಂದ್ರ ನಾಡಿಗ್
ಎಲ್ಲಿ ಹೋದೆ ಇಂದು? (Female Version)